ಗೋಪಾಲಸ್ವಾಮಿ ಬೆಟ್ಟ -
ಚಾಮರಾಜನಗರ ಜಿಲ್ಲೆಯಲ್ಲಿ ಗುಂಡ್ಲುಪೇಟೆಯಿಂದ 15ಕಿಮೀ ನೈಋತ್ಯಕ್ಕಿರುವ ಬೆಟ್ಟ. ಸುಂದರ ತಾಣ, ಐತಿಹಾಸಿಕ ಸ್ಥಳ. ಸಮುದ್ರಮಟ್ಟದಿಂದ 1446ಮೀ ಎತ್ತರವಿದೆ.

ಶಿಖರವನ್ನೇರಲು 5ಕಿಮೀ ಮಾರ್ಗ ಸವೆಸಬೇಕಾಗುತ್ತದೆ. ಬೆಟ್ಟದಲ್ಲಿ ಅನೇಕ ನೀರುಬುಗ್ಗೆಗಳಿದ್ದು ಜಲಾಂಶ ಅದಿsಕವಾಗಿದೆ. ಬೆಟ್ಟ ಸದಾ ಹಸಿರುಮಯವಾಗಿರುತ್ತದೆ. ವರ್ಷದ ಬಹುಕಾಲ ಮಂಜುಮೋಡಗಳಿಂದ ಮುಸುಕಿರುವುದರಿಂದ ಇದು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದೇ ಪ್ರಸಿದ್ಧವಾಗಿದೆ. ಹವಾಮಾನ ಚನ್ನಾಗಿರುವಾಗ ಮೈಸೂರು ಮತ್ತು ವೈನಾಡು ಪ್ರದೇಶಗಳ ಮನೋಹರ ದೃಶ್ಯವನ್ನು ಕಾಣಬಹುದು.

	ಬೆಟ್ಟದ ಮೇಲುಭಾಗವನ್ನು ಸುತ್ತುವರಿದಿದ್ದ ಹಳೆಯ ಕೋಟೆ ಮತ್ತು ಕಂದಕದ ಅವಶೇಷಗಳನ್ನು ದೂರದಿಂದಲೇ ಗುರುತಿಸಬಹುದು. ಕೋಟೆಯ ಒಳಭಾಗದಲ್ಲಿ ಗೋಪಾಲಸ್ವಾಮಿ ದೇವಾಲಯವಿದೆ. ಇದು ಹೊಯ್ಸಳ 3ನೆಯ ಬಲ್ಲಾಳನ ಮಂತ್ರಿ ಮಾಧವ ದಣ್ಣಾಯಕನಿಂದ ನಿರ್ಮಾಣವಾದುದು (ಸು.1300). ಇಲ್ಲಿ ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ.

	ಪುರಾಣಗಳಲ್ಲಿ ಈ ಬೆಟ್ಟವನ್ನು ಕಮಲಾದ್ರಿ, ದಕ್ಷಿಣ ಗೋವರ್ಧನಗಿರಿ ಎಂದು ಕರೆಯಲಾಗಿದೆ. ಈ ಪ್ರದೇಶಕ್ಕೆ ಬೆಟ್ಟದಕೋಟೆ, ಮೂಡಣ ಕೋಟೆ ಎಂಬ ಹೆಸರುಗಳೂ ಇದ್ದುವು. ಇಲ್ಲಿಯ ಕೋಟೆಯನ್ನು ಕಟ್ಟಿದವನು ಸೋಮಣ್ಣ ಡಣಾಯಕನೆಂದು ಒಂದು ಹೇಳಿಕೆ. ಪ್ರಾಯಶಃ ಇದೂ ಮಾಧವ ದಣ್ಣಾಯಕನ ಕಾಲದ್ದು. 15-17ನೆಯ ಶತಮಾನಗಳಲ್ಲಿ ಇದು ಕೋಟೇಸೀಮೆ ಎಂಬ ಪಾಳೆಯಪಟ್ಟಿನ ಮುಖ್ಯ ಸ್ಥಳವಾಗಿತ್ತು. ಆ ಸೀಮೆಯ ಅರಸುಗಳ ಅನುಕ್ರಮ ಹೀಗಿದೆ- ಇಮ್ಮಡಿ ರಾಜ ಒಡೆಯ  ನಂಜರಾಜ ಒಡೆಯ (1489) ದೇವರಾಜ ಒಡೆಯ (1503) ಗೋವಣ್ಣ ಒಡೆಯ (1504) ದೇವೊಡೆಯ (1512) ಸಿಂಗಪ್ಪ ಒಡೆಯ  ಚೆನ್ನರಾಯ ಒಡೆಯ (1517)  ಕೋಟೆ ಒಡೆಯ (1513)  ಮಾಧವ ನಾಯಕ (1530-48)  ದೊಡ್ಡ ಮಲ್ಲರಾಯ  ಒಡೆಯ (1559) ಲಿಂಗರಾಜ ಒಡೆಯ (1650-54)  ನಂಜರಾಜ ಒಡೆಯ (1569).	
  (ಟಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ